<div style="background:#ffffed">
<ನಳಚರಿತ್ರೆ
 
ನಳಚರಿತ್ರೆ:ಎರಡನೆಯ ಸಂಧಿ(ಸಂಗ್ರಹ} 
(ಮೂಲದೊಂದಿಗೆ ಪರಿಶೀಲಿಸತಕ್ಕದ್ದು)
ಕೇಳು ಕುಂತೀತನಯ ಭೀಮನೃ 
ಪಾಲತನುಜೆಗೆ ವಿರಹ ಬಲಿದು  ವಿ 
ಶಾಲವಾಗಿರಲಿತ್ತ ಕೇಳೈ ನಿಷಧನಗರಿಯನು 
ಪಾಲಿಸುವ ನಳಚಕ್ರವರ್ತಿಯು 
ಮೇಲೆನಿಪ ಸಭೆಯಲ್ಲಿ ರತ್ನದ 
ಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ ||೧||

ಆ ಸಮಯದಲಿ ಬಂದನಲ್ಲಿಗೆ 
ದೇಶಯಾತ್ರಿಕ ಭೂಸುರನೊಳವ 
ನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆ 
ಭೂಸುರೋತ್ತಮನೆಂದನೆಲೆ ಧರ 
ಣೀಶ ಕೇಳು ವಿದರ್ಭನಗರದೊ 
ಳೇಸು ಪುಣ್ಯೋದಯದಿ ಪಡೆದನೊ ಭೀಮನೃಪ ಸುತೆಯ ||೩||

ಅವಳ ರೂಪಗುಣಾತಿಶಯಗಳ 
ನೆವಗೆ ಬಣ್ಣಿಸಲಳವೆ ಕೇಳಾ 
ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು 
ಪ್ರವಿಮಲಾಕಾರದಲಿ ಮೃದುತರ 
ಸವಿನುಡಿಯ ಸಂಭಾಷಣೆಗಳಲಿ 
ಭುವನದೊಳು ನಾಕಾಣೆ ದಮಯಂತಿಗೆ ಸಮಾನರನು ||೪||

ಮುರಹರನ ನಿಜಸೊಸೆಯ ರೂಪಂ 
ತಿರಲಿ ಚಂದ್ರನ ಮಗಳ ಚೆಲುವಂ 
ತಿರಲಿ ಮೈನಾಕನ ಸಹೋದರಿಯಂದವಂತಿರಲಿ 
ಶರಧಿತನುಜೆಯ ಸೌಂದರಿಯವನು 
ಮರಸಿತೆಂಬುದು ಲೋಕದೊಳಗಾ 
ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ||೫||

ಹೇಳುತಿರೆ ನುಡಿನುಡಿಗೆ ಮೆಚ್ಚುತ 
ಕೇಳಿ ತಲೆದೂಗಿದನು ನೈಷದ 
ನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆ 
ಬಾಲಿಕೆಯ ಮೋಹಿಸಿದ ಪುಷ್ಷಶ 
ರಾಳಿಯಲಿ ಮನನೊಂದು ಶಿವ ಶಿವ 
ಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ ||೭||

ವನಿತೆ ಗುಣಗಳೊಳೊಂದನೊಂದನು 
ಮನದೊಳಗೆ ಸವಿಮಾಡಿ ತರುಣಿಯ 
ನೆನೆದು ಹೊಂಪುಳಿವೋಗಿ ವಿರಹದಿ ಮದನಗೀಡಾಗಿ 
ಘನವಿರಹದಲಿ ಕಾಯಕುಂದಿದ 
ಜನಪ ನಳನಿರೆ ಬೇಂಟೆಕಾರರ 
ಜನನಿವಹದಿಂ ಬಂದರಾ ಸಮಯದಲಿ ವನಚರರು ||೮||

ಅರಸ ಕೇಳ್ ಶಶಿಕುಲಶಿರೋಮಣಿ 
ಧರಿಸಿದನು ನವರತುನಮಯದಾ 
ಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿ 
ತರಿಸಿಯೇರಿದ ವಾಯುವೇಗದ 
ತುರಗವನು ಸಂದಣಿಸಿ ಮೋಹರ 
ತೆರಳಿತಗಣಿತ ವಾದ್ಯದಲಿ ನೆಲ ಬಿರಿಯಲೈತಂದ ||೧೧||

ನಿಲಿಸಿ ಬೇಂಟೆಯನಲ್ಲಿ ಬಳಲಿದ 
ಬಲಸಮೇತದಿ ಬಂದು ತತ್ಪುರ 
ವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿ 
ನಲವು ಹಿಂಗಿದ ಮನದ ದುಗುಡದೊ 
ಳಿಳಿದು ತೊಳೆದನು ಜಾನುಜಂಘೆಯ 
ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ ||೧೪||

ಆ ಕೊಳದ ತೀರದಲಿ ತರುಗಳ 
ನೇಕವದರೊಳಗೊಂದು ಠಾವಿನೊ 
ಳೇಕವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿ 
ಆ ಕಮಲಜನತುರಗ ನಿದ್ರಾ 
ವ್ಯಾಕುಲದಿ ಮಲಗಿರಲು ಡ ಶು 
ಭಾಕರೋನ್ನತ ಶುಭ್ರತೇಜದ ರಾಜಹಂಸವನು ||೧೫||

ಅರುಣಮಯದಾನನದ ಪದಯುಗ 
ಗರಿಗಳುನ್ನತಧವಳ ದೇಹದ 
ಪರಮತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿ 
ಹರಹರಾ ಇದರಾಯತವ ಮುರ 
ಹರನು ತಾನೇ ಬಲ್ಲನೆನುತ 
ಕ್ಕರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು ||೧೬||

ಒದರಿ ಕುಣಿಯಲು ಹಸ್ತದೊಳಗದ 
ಕದಲದಂತಿರೆ ಪಿಡಿಯಲರಸನ 
ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ 
ಹೃದಯ ಕರಗುವ ಮಾತನೆಂದುದು 
ಮದಕರಿಗೆ ನೊರಜಂತರವೆ ಕೈ  
ಸದರದವರನು ಕೊಲುವುದೇನರಿದೆಂದುದಾ ಪಕ್ಷಿ ||೧೭||

ಕರಿಗಳನು ಮುರಿದಿಡುವ ಸಿಂಹಕೆ 
ನರಿಗಳಿದಿರೇ ತಾನು ನಿನಗಂ 
ತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆ 
ಅರಿಭಯಂಕರ ಶತ್ರುಗಳ ಸಂ 
ಹರಿಸುವುದು ನೃಪನೀತಿ ನಿನಗಿದು 
ತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ ||೧೮||

ಬಡಬಗೌತಣವಿಕ್ಕುವಡೆಯೊ 
ಕ್ಕುಡಿತೆ ಹಾಲೇ ಮಂಜು ಸುರಿಯ 
ಲ್ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು 
ಒಡಲಿಗಾಪ್ಯಾಯನವೆ ಕೇಳೆಲೆ 
ಪೊಡವಿಪತಿ ಬಿಡು ನನ್ನ ಮನೆಯಲಿ 
ಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ ||೧೯||

ಮರನ ಹುತ್ತವನಚೇರಿದರ ಸಂ 
ಗರದಿ ದೈನ್ಯಂಬಡುವರಾಯುಧ 
ಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರ 
ತರುಣಿಯರ ಮರೆಗೊಂಡವರ ನಿ 
ಬ್ಬರದಿ ಮುರಿದೋಡುವರ ನಿದ್ರಾ 
ಭರದೊಳಿರ್ದರ ಕೊಲುವುದುಚಿತವೆಯೆಂದುದಾ ಪಕ್ಷಿ ||೨೦||

ನುಡಿಗೆ ನಾಚಿದನರಸ ಹಂಸದ 
ನಡವಳಿಗೆ ಮೆಚ್ಚಿದನು ನಿನ್ನನು 
ಹಿಡಿದು ಕೊಲ್ಲುವವನಲ್ಲ ನಿನ್ನಾಲಯಕೆ ಹೋಗೆಂದು 
ಬಿಡಲು ರೆಕ್ಕೆಯ ಕೊಡಹಿ ಹಾರಿತು 
ವೊಡನೆ ಮರಳಿತು ಧರೆಗೆ ರಾಯನ 
ಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ ||೨೧||

ಭೂರಮಣ ಕೇಳಸುವ ಕಾಯ್ದುಪ 
ಕಾರಮಾಡಿದೆ ನೀನು ನಿನಗುಪ 
ಕಾರಮಾಡುವೆನೆನಲದೇನೆಂದರಸ ಬೆಸಗೊಂಡ 
ಸಾರಹೃದಯನೆ ಚಿತ್ತವಿಸು ವಿ 
ಸ್ತಾರದಿಂದರುಹುವೆನು ಭುವನದೊ
ಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷಿ ||೨೨||

ಅರಸ ಕೇಳತಿದೂರದಲಿ ಸುರ 
ಪುರವ ಪೋಲ್ವ ವಿದರ್ಭಪಟ್ಟಣ 
ದರಸು ಭೀಮನೃಪಾಲನಾತನ ತನುಜೆ ದಮಯಂತಿ
ಪರಮ ಪುಣ್ಯಾಂಗನೆ ಮಹಾಸುಂ 
ದರಿ ನಿಪುಣೆ ಗಜಗಮನೆ ನಯಗುಣ 
ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ ||೨೩||

ಪೊಗಳಲಳವೇ ಸತಿಯ ಚೆಲುವಿನ 
ಬಗೆಯ ಭಾವಿಸಿ ನೋಡಲತಿ ಸೋ
ಜಿಗವು ನೆರೆ ದಮಯಂತಿ ಯೌವನರೂಪರೇಖೆಯಲಿ 
ನಗೆಮೊಗದ ಪೊಂಬೊಗರ ಮಿಂಚಿನ 
ಬೊಗಸೆಗಂಗಳ ಸೆಳೆನಡುವ ಸೆ 
ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ ||೨೪||

ಕ್ಷಿತಿಯೊಳಿಹ ಸತಿಯರಲಿಯಮರಾ 
ವತಿಯೊಳಿಹ ಪೆಣ್ಗಳಲಿ ಮೇಣಾ 
ವತಳದಲ್ಲಿಹ ನಾರಿಯರಲೀಕ್ಷಿಸಿದಡಾ ಸತಿಗೆ 
ಪ್ರತಿಯ ಕಾಣೆನು ರೂಪಿನಲಿ ನೀ 
ನತಿ ಚೆಲುವ ನಿನಗವಳು ಪಾಸಟಿ 
ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು ||೨೫||

ಅವಳು ನಿನಗೊಲಿವಂತೆ ಮಾಡುವೆ 
ಶಿವನ ಕೃಪೆ ನಿನಗುಂಟು ನಮ್ಮಲಿ 
ಸವನುಡಿಯಿಲ್ಲರಸ ನಂಬುವುದೆನ್ನ ನೀನೆನಲು 
ಅವನಿಪತಿ ನಸುನಗುತ ಹಂಸೆಯ 
ಸವಿನುಡಿಗೆ ಮನಸೋತು ವಿರಹದ 
ತವಕದಲಿ ಹೇವರಿಸಿ ನುಡಿದನು ನೃಪತಿ ಖಗಪತಿಗೆ ||೨೬||

ಮನಸಿಜನ ಶರಹತಿಗೆ  ನೊಂದದೆನು
ತನುವ ಸೈರಿಸಲಾರೆನೆನಗಾ 
ವನಿತೆಯನು ಸೇರಿಸುತ ಸಲಹೆನ್ನಸುವ ಕರುಣದಲಿ 
ಎನಗೆ ನೀನೇ ಪರಮಬಾಂಧವ 
ಮನಕೆ ಹರುಷವ ಮಾಡು ನೀನೀ 
ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ ||೨೭||

ತಳಿತ ಮೇಘದಿ ಹೊಳೆವ ಮಿಂಚಿನ 
ಬಳಗವೆನೆ ಹಂಸಗಳು ನಭದಿಂ 
ದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು 
ನಳಿನಲೋಚನೆ ಕಂಡು ಪಕ್ಷಿಯ 
ಲಲನೆಯರ ಮೊಗ ನೋಡಿ ಹಂಸದ 
ಚೆಲುವ ಬಣ್ಣಿಸಿ ಹಿ ಡಿಯಬೇಕೆಂದೆನುತ ಗಮಿಸಿದಳು ||೩೨||

ಎಲೆ ಸರೋರುಹಗಂಧಿ ನೀನೆನ 
ಗೊಲಿದು ಮನದಲಿ ಹಿಡಿವೆನೆಂಬೀ 
ಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳು 
ನಿಲುಕುವವರಾವಲ್ಲ ಬರಿದೇ 
ಬಳಲದಿರು ತಾ ಬಂದ ಪರಿಯನು 
ತಿಳುಹುವೆನು ನಿನಗೆಲ್ಲವನು ಕೇಳೆಂದುದಾಪಕ್ಷಿ ||೩೫||

ನಳಿನಮುಖಿ ನಳಚಕ್ರವರ್ತಿಯ 
ಬಳಿಯ ವಾಹನವಾಗಿ ತಾನಿಹೆ 
ನೊಲಿದು ಸಲಹುವನೆನ್ನ ಪರಮಪ್ರೀತಿಯಲಿ 
ಇಳೆಗೆ ನಳಕೂಬರ ಜಯಂತರ
ಚೆಲುವ ಮದನನ ರೂಪರೇಖೆಯ 
ಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ ||೩೬||

ನಿನ್ನ ರೂಪಿಗೆ ಸಲುವುದೌ ನಳ 
ನುನ್ನತದ ಸೌಂದರ್ಯ ಜಗದೊಳು 
ಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದು 
ಎನ್ನಲಾ ನುಡಿಗೇಳಿ ಹಂಸೆಗೆ 
ತನ್ನ ಶಿರವನು ಬಾಗಿ  ಗುಣಸಂ
ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ ||೩೭||

ಪರಮಗುಣನಿಧಿ ಪಕ್ಷಿ ಕೇಳ್ ಬಾ 
ಹಿರನು ಪಾತಕಿ ಮದನನೆಲೆ ನಿ 
ಷ್ಠುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲು 
ಕರುಣರಸಧಾರೆಯಲಿ ತಾಪವ 
ಪರಿಹರಿಸಬೇಕೆಂದು ನೀನಾ 
ಧರಣಿಪತಿ ನಳನೃಪಗೆ ಬಿನ್ನೈಸೆಂದಳಿಂದುಮುಖಿ ||೩೮||

ಬಲಿದ ವಿರಹಾಗ್ನಿಯಲಿ ನೊಂದೆನು 
ಬಳಲಿದೆನು ತನು ಬಾಡಿ ತಾಪದಿ 
ನಲವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತು 
ಹಲವು ಮಾತೇನಿನ್ನು ನಳನೃಪ 
ತಿಲಕನೆನ್ನಯ ಪತಿಯಲಾ ಭೂ 
ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ ||೪೦||

ಅರಸ ಕೇಳಾ ಹಂಸ ತರುಣಿಯ 
ಕರುಣದಳತೆಯ ಕಂಡು ತಾ ಬಂ 
ದಿರುವ ಕಾರ್ಯದ ಹದನು ಲೇಸಾಯ್ತೆಂದು ಮನದೊಳಗೆ 
ಹರುಷ ಮಿಗೆ ಕೊಂಡಾಡಿ ಸತಿಯನು 
ಕರೆದು ನುಡಿದುದು ನಿನಗೆ ನಳಭೂ 
ವರನ ಪತಿಯನು ಮಾಳ್ಪೆನಂಜದಿರೆಂದುದಾ ಹಂಸೆ ||೪೧||

ಬಂದ ಹಂಸೆಯ ಕಂಡು ಮುಖಕಳೆ 
ಯಿಂದಲರಿದನು ನೃಪತಿ ಮನದಲಿ 
ಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ 
ಮಂದಗಮನೆಯ ಕಂಡಿರೇ ಏ 
ನೆಂದು ನುಡಿದಳು ಸತಿಯ ಬಗೆಯೇ 
ನೆಂದು ಕೇಳಲು ನೃಪಗೆ ಬಳಿಕಿಂತೆಂದುದಾ ಪಕ್ಷಿ ||೪೪||

ಮಾನವಾಧಿಪ ಕೇಳು  ಮನದನು 
ಮಾನವನು ಬಿಡು ಗುಡಿಯ ಕಟ್ಟಿಸು 
ನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು 
ಮಾನನಿಧಿ  ನೀ ಮುನ್ನ ಮಾಡಿದ 
ನೂನ ಸುಕೃತದ ಫಲವೊ ನಿನ್ನನೆ 
ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ ||೪೫||

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ

ನೋಡಿ